ಡಾ.ಬಿ.ಎಸ್.ಪ್ರಣತಾರ್ತಿಹರನ್

ಡಾ.ಬಿ.ಎಸ್.ಪ್ರಣತಾರ್ತಿಹರನ್ (ಜ.೧೯೫೦)

ಕಳೆದ ೩೦ ವರ್ಷಗಳಿಂದ (೧೯೮೩) ಸಾಂಸ್ಕೃತಿಕ ಅಧ್ಯಯನದಲ್ಲಿ ನಿರತ. ಅದಕ್ಕಾಗಿ ೧೯೯೨ರಲ್ಲಿ ಪಿ ಎಚ್.ಡಿ.ಪದವಿ. ಕವನ ಸಂಕಲನ, ಕಾದಂಬರಿ, ಸಣ್ಣಕತೆ, ಪ್ರವಾಸ ಸಾಹಿತ್ಯ, ಅನುವಾದ, ಜೀವನ ಚರಿತ್ರೆಯ ಕೃತಿಗಳನ್ನು ತಂದಿದ್ದರೂ ಸಾಂಸ್ಕೃತಿಕ ಅಧ್ಯಯನವೇ ಪ್ರಧಾನ ಕ್ಷೇತ್ರ. ಆ ಕ್ಷೇತ್ರದಲ್ಲಿ ೧೫ ಕೃತಿಗಳು ಬಂದಿವೆ. ಅದಕ್ಕೆ ಪೂರಕವಾಗಿ ೩೦ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಅದಕ್ಕೆ ಆಧಾರವಾಗಿದ್ದು ಸಹೃದಯಸ್ಪಂದನ ಎಂಬ ಸಾಂಸ್ಕೃತಿಕ ವೇದಿಕೆಯನ್ನು ಕಟ್ಟಿ ನಿರ್ವಹಿಸಿದ ಅನುಭವ ಮತ್ತು ಸಂಶೋಧನೆಗಾಗಿಯೇ ಕಟ್ಟಿ ನಿರ್ವಹಿಸುತ್ತಿರುವ ಸಮುದಾಯ ಅಧ್ಯಯನ ಕೇಂದ್ರ ಎಂಬ ಸಂಸ್ಥೆ.

ಸಾಂಸ್ಕೃತಿಕ ಅಧ್ಯಯನದ ಕಾರಣಕ್ಕಾಗಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ನಿರಂತರ ಕ್ಷೇತ್ರಕಾರ್ಯ ಮಾಡಿ ಸಹಸ್ರಾರು ವಕ್ತೃಗಳ ಸಹವಾಸ ಲಾಭ. ಅದರ ವಿಸ್ತರಣವಾಗಿ ಭಾರತದ ಇತರ ರಾಜ್ಯಗಳು ಮತ್ತು ಅಮೆರಿಕದಲ್ಲೂ ಕ್ಷೇತ್ರಕಾರ್ಯ, ವಿಸ್ತರಿಸಿದ ಲೋಕದೃಷ್ಟಿ. ಅಪಾರ ಮಾಹಿತಿಯ ಸಂಗ್ರಹ ಮತ್ತು ಲೋಕಾನುಭವದ ಜತೆಗೆ ಪ್ರಾಪ್ತವಾದ ಮುಕ್ತದೃಷ್ಟಿಯೇ ಇತರ ಸೃಜನಕೃತಿಗಳ ಮೂಲಾಧಾರ. ಕುಗ್ರಾಮಗಳಲ್ಲಿ ಕೃಷಿಯ ಬಡತನದ ಬದುಕಿನಿಂದ ಪ್ರಾರಂಭಿಸಿ ಯುರೋಪು ಅಮೆರಿಕದಂಥ ಅತಿ ಮುಂದುವರಿದ ದೇಶಗಳಲ್ಲಿ ಕಂಡ ಬದುಕಿನ ಅನುಭವಸಂಕೀರ್ಣತೆಯ ಪೋಷಣೆ.

ಟೆಲಿಫೋನ್ ಆಪರೇಟರನಾಗಿ ವೃತ್ತಿಯನ್ನಾರಂಭಿಸಿ ಕೆಳಸ್ತರದಲ್ಲಿ ಸಂತೃಪ್ತನಾಗಿದ್ದ ಹೊತ್ತಿನಲ್ಲಿ ಅಕಾರಣವಾಗಿ ಕೆಣಕಿದ ಜನ ಮತ್ತು ಸನ್ನಿವೇಶಗಳಿಗೆ ಹೋರಾಟದ ಉತ್ತರ. ಅದರ ಪರಿಣಾಮವಾಗಿ ಹೆಚ್ಚಿಸಿಕೊಂಡ ಶೈಕ್ಷಣಿಕ ಅರ್ಹತೆ; ಆಕಾಶವಾಣಿ ಮತ್ತು ಅಲ್ಲಿಂದ ಕಾಲೇಜು ಶಿಕ್ಷಣ ಇಲಾಖೆಗೆ ಪ್ರವೇಶ; ಸಂಶೋಧನೆಗೆ ತೊಡಗಿ ಅದನ್ನು ನಿಯತವಾಗಿ ಮುಂದುವರಿಸಿದ್ದು, ಜೀವನ ಕುತೂಹಲವನ್ನು ಹೆಚ್ಚಿಸಿಕೊಂಡಿದ್ದು,ಸತ್ಯವನ್ನು ಕಾಣಲು ತುಡಿದಿದ್ದು.

ಪರಿಶ್ರಮ ಮತ್ತು ತ್ಯಾಗದ ದಾರಿಗೆ ಪಂಡಿತಾಶ್ರಯ ಮತ್ತು ಸಂಘಟನೆಯ ಕವಲು ಸೇರಿತು; ಕಾಣ್ಕೆ ಹೊಮ್ಮಿತು,ಗುರಿ ನಿಶ್ಚಯವಾಯಿತು, ಸಹೃದಯರ ಸಹಕಾರ ಮುಕ್ತವಾಗಿ ಸಿಕ್ಕಿತು; ಪ್ರಬಂಧಗಳಲ್ಲಿ ಕಾವ್ಯ ಹುದುಗಿ ಬೆರಗಿನ ದಾರಿ ಸಿದ್ಧವಾಯಿತು. ಪೂಜ್ಯರಾದ ಡಾ.ಕೆ.ಅನಂತರಾಮು, ಪ್ರೊ.ಜಿ.ಅಶ್ವತ್ಥನಾರಾಯಣ, ಎನ್.ಎಸ್.ಶಾರದಾ ಪ್ರಸಾದ್, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳಂಥ ಪ್ರಾತಃ ಸ್ಮರಣೀಯ ದಾರಿದೀಪಗಳ ಬೆಳಕಿನ ದಾರಿ ಅದು.

ಬಿ.ಎಸ್.ಪ್ರಣತಾರ್ತಿಹರನ್ :  ಜನನ : ಜೂನ್ ೯,೧೯೫೦;
ಬಸವಾಪಟ್ಟಣ, ಹಾಸನಜಿಲ್ಲೆ

ತಂದೆ : ಸಂಸ್ಕೃತವ್ಯಾಕರಣ ವಿದ್ವಾನ್  ಶ್ರೀ ಬಿ.ಎಸ್.ಸುಬ್ಬರಾಯಶಾಸ್ತ್ರಿ (ಮಾಡಿದ ಸೇವೆ : ಸಂಸ್ಕೃತ ಅಧ್ಯಾಪಕರು, ಪ್ರೌಢಶಾಲೆ, ಕೊಣನೂರು, ಹಾಸನಜಿಲ್ಲೆ)

ತಾಯಿ : ಪಾರ್ವತಮ್ಮನವರು (ಮುದಲಾಪುರ,ಹಾಸನಜಿಲ್ಲೆ)

ಅಣ್ಣಂದಿರು : ಬಿ.ಎಸ್.ಶೇಷಕೃಷ್ಣ,ಬಿ. ಎಸ್ ಸಿ,ಬಿ.ಎಡ್, ಎಮ್.ಎ., (ಕನ್ನಡ) (ಮಾಡಿದ ಸೇವೆ : ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪ್ರೌಢಶಾಲೆ, ಕೆರಳಾಪುರ, ಹಾಸನಜಿಲ್ಲೆ}

ಡಾ. ಬಿ.ಎಸ್.ನರಹರಿ ಎಂ.ಎಸ್ ಸಿ,ಪಿ ಎಚ್.ಡಿ. (ಮಾಡಿದ ಸೇವೆ : ಪ್ರಾಧ್ಯಾಪಕರು, ಭೌತಶಾಸ್ತ್ರ; ಕಾಲೇಜುಶಿಕ್ಷಣ ಇಲಾಖೆ)

ತಂಗಿಯರು : ಸಂಗೀತ ವಿದುಷಿ ಬಿ.ಎಸ್.ನಾಗರತ್ನ ,  ಬಿ.ಎಸ್.ಲಲಿತಮ್ಮ

ಪತ್ನಿ: ಡಾ.ಎಂ.ಎಸ್.ವಿಜಯ ಎಂ.ಎ., (ಕನ್ನಡ) ಪಿ ಎಚ್.ಡಿ. (ಆನಂದರ ಬದುಕು ಬರಹ) ನಿರ್ದೇಶಕರು (ನಿವೃತ್ತ ) ಆಕಾಶವಾಣಿ; ಲೇಖಕಿ

 ಮಗಳು : ಚಿ.ಸೌ.ಶರ್ವಾಣಿ ಬಿ.ಇ.,ಇಂಜಿನಿಯರ್, ವಾಷಿಂಗ್ಟನ್ ಪೋಸ್ಟ್, ಯು.ಎಸ್.ಎ.

ಮೊಮ್ಮಕ್ಕಳು : ಚಿ.ಆರ್ಯಾ(೭), ಚಿ.ಅನೀಶ್(೪), ಚಿ,ಅಂಶು(೪)