‘ಸಾರ್ಥು’ ಸಂಕೇತಿ ಭಾಷೆಯ ಪುನರುತ್ಥಾನಕ್ಕೊಂದು ಸುಸಂಧಿ

300-x-200_ಬಹುದಿನಗಳಿಂದ ನಿರೀಕ್ಷಣೆ ಮಾಡಲಾಗುತ್ತಿದ್ದ ಮಹಾಘಟನೆ ೨೫-೯-೨೦೧೬ರಂದು ನಡೆಯಿತು. ಮೈಸೂರಿನ ಶಾರದಾವಿಲಾಸ ಶಿಕ್ಷಣಸಂಸ್ಥೆಗಳ ಶತಮಾನೋತ್ಸವ ಭವನದಲ್ಲಿ ನಡೆದ ಈ ಮಹಾಪರ್ವಕ್ಕೆ ೨೫೦ಕ್ಕೂ ಹೆಚ್ಚು ಸಹೃದಯರು ಸಾಕ್ಷಿಯಾದರು. ಕನ್ನಡಮೇರು ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಹಾಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಸಮ್ಮುಖದಲ್ಲಿ ‘ಸಾಥ’ ಕೃತಿಯನ್ನು ಭಾಷಾಶಾಸ್ತ್ರಜ್ಞ ಡಾ. ಕೆ.ಎಸ್. ನಾಗರಾಜ್ ಲೋಕಾರ್ಪಣ ಮಾಡಿದರು.

‘ಸಾರ್ಥ’ ಎಸ್.ಎಲ್. ಭೈರಪ್ಪನವರ ಮಹಾಕಾದಂಬರಿಗಳಲ್ಲಿ ಒಂದು. ಕ್ರಿ.ಶ. ಎಂಟನೆಯ ಶತಮಾನದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ಮತ್ತು ಆರ್ಥಿಕ ತಲ್ಲಣಗಳನ್ನು ಚಿತ್ರಿಸಿದ ಸಂಕೀರ್ಣಕೃತಿ ಇದು. ಸಮಷ್ಟಿಯ ದೊಡ್ಡ ಉದ್ದೇಶಕ್ಕಾಗಿ ಸ್ವಂತದ ಬೇಕುಬೇಡಗಳನ್ನು ಬದಿಗೊತ್ತಬೇಕು ಎಂಬ ಸಾರ್ವಕಾಲಿಕ ಸಂದೇಶ ಈ ಕೃತಿಯಲ್ಲಿ ಸಾಂದರ್ಭಿಕವಾಗಿ ಪ್ರಸ್ಥಾಪಿತವಾಗಿದೆ. ಎಲ್ಲ ಐತಿಹಾಸಿಕ ಮತ್ತು ಕಾಲ್ಪನಿಕ ಸಾಮಗ್ರಿಯನ್ನು ಬಳಸಿಕೊಂಡು ನೇಯ್ದ ಈ ಕಾದಂಬರಿಯ ನಾಯಕ ಆದಿಶಂಕರಾಚಾರ್ಯರು. ಶಂಕರರು ಮಿಂಚಿನಂತೆ ಬೆಳಗಿ ಅಷ್ಟೇ ಬೇಗ ಮಾಯವಾದರೂ ಅವರು ಭಾರತದ ಆ ಸಂಧಿಕಾಲದಲ್ಲಿ ಪ್ರತಿಷ್ಠಾಪಿಸಿದ ಸಮನ್ವಯತತ್ತ್ವವೇ ಕಾದಂಬರಿಯ ಕೇಂದ್ರ ಆಶಯ. ಆ ಜ್ಞಾನದ ಅನಾವರಣಕ್ಕಾಗಿಯೇ ಎಲ್ಲ ಪಾತ್ರಗಳೂ, ಕ್ರಿಯೆಗಳೂ, ತುಮುಲಗಳೂ, ಕಂಪನಗಳೂ ಬಂದಿವೆ.

ಈ ಕೃತಿಯ ಸಂಕೇತಿ ರೂಪವೇ ‘ಸಾರ್ಥು’ ಜ್ಞಾನದ ಬಲದಿಂದ ಪಡೆದ ವಿವೇಕವನ್ನು ಬಳಸಿ ಸಮನ್ವಯದ ಅನುಷ್ಠಾನ ಮಾಡಿ ಐಕ್ಯತೆ, ಶಾಂತಿ ಮತ್ತು ಪ್ರಗತಿಯನ್ನು ಸಾಧಿಸಬೇಕು ಎಂಬುದನ್ನು ಪ್ರಚುರಪಡಿಸುವ ಮಹಾಕೃತಿ ಸಾರ್ಥ. ಅದು ಸಂಕೇತಿಭಾಷೆಗೆ ಅನುವಾದಗೊಂಡು ಗ್ರಂಥರೂಪದಲ್ಲಿ ಬಂದ ಮೊದಲ ದೊಡ್ಡ ಸಾಹಿತ್ಯಿಕ ಪ್ರಯತ್ನವಾಗಿದೆ. ಆಶಯ, ಸತ್ವ, ಕಲೆಗಾರಿಕೆಯ ದೃಷ್ಟಿಯಿಂದಲೂ ಸಾರ್ಥಕ ನಾಂದಿಯಾಗಿದೆ.

ಇದು ಮಹಾಘಟನೆ ಎನಿಸಿದುದು ಇಷ್ಟು ಮಾತ್ರಕ್ಕಲ್ಲ. ಇಲ್ಲಿಗೆ ೧೦೦ ವರ್ಷಗಳ ಹಿಂದೆ, ೨೦ನೆಯ ಶತಮಾನದ ಆದಿಯಲ್ಲಿ ಸಮಗ್ರ ಸಂಕೇತಿಗಳ ಮಹಾಸಮ್ಮೇಳನಗಳು ನಡೆದಿದ್ದುವು. ಕೌಟಿಲ್ಯನ ಅರ್ಥಶಾಸ್ತ್ರಖ್ಯಾತಿಯ ಮಹಾಮಹೋಪಾಧ್ಯಾಯ ಶಾಮಶಾಸ್ತ್ರಿಗಳೂ ಸೇರಿದಂತೆ ಆಗಿನ ಅನೇಕ ಹಿರಿಯ ಮುತ್ಸದ್ದಿಗಳು ಅದರಲ್ಲಿ ನೇತಾರರಾಗಿ ಭಾಗವಹಿಸಿದ್ದರು. ಆಗ ಒಂದು ಐತಿಹಾಸಿಕ ನಿರ್ಣಯವನ್ನು ಮಾಡಲಾಯಿತು. "ಕೇವಲ ಆಡುಭಾಷೆಯಾಗಿಯೇ ಉಳಿದರೆ ಸಂಕೇತಿ ಭಾಷೆ ನಶಿಸಿಹೋಗುತ್ತದೆ. ಬರಹಕ್ಕಿಳಿಸದಿದ್ದರೆ ಭಾಷೆ ಉಳಿಯದು. ನಮ್ಮ ವ್ಯವಹಾರ ಭಾಷೆಯಾಗಿ ಮಾತ್ರವಲ್ಲದೆ ಬರವಣಿಗೆಯ ಭಾಷೆಯಾಗಿಯೂ ಸಂಕೇತಿಯನ್ನು ಬಳಸಬೇಕು. ಆಗಮಾತ್ರ ಈ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಸೊಗಡನ್ನು ಉಳಿಸಿಕೊಂಡ ಸಂಕೇತಿ ಭಾಷೆ ಉಳಿಯುತ್ತದೆ. ಇಲ್ಲವಾದರೆ ನಮ್ಮತನ ನಾಶವಾಗುತ್ತದೆ" ಎಂದು ಸಾರಿದರು. ಆದರೆ ಆ ಕಾಲದಲ್ಲಿ ಬಹುಪಾಲು ಸಂಕೇತಿಗಳು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು, ಸಂಕೇತಿಯನ್ನೇ ಆಡುತ್ತಿದ್ದರು. ಭಾಷೆಯು ಬರಹಕ್ಕಿಳಿಯದಿದ್ದರೆ ಆಗುವ ದೂರಗಾಮೀ ಪರಿಣಾಮಗಳು ಯಾರಿಗೂ ಮೂಳೆಗೆ ತಾಕುವಂತಿರಲಿಲ್ಲ. ಮುಂದೆ ಆದ ನಗರೀಕರಣದೊಂದಿಗೆ ಭಾಷೆ ನವೆಯುತ್ತ ಬಂತು. ಶೇ. ೮೦ರಷ್ಟು ಸಂಕೇತಿಗಳು ನಗರಗಳಲ್ಲಿಯೇ ಇರುವ ಈ ದಿನಗಳಲ್ಲಿ ನಗರವಾಸಿಗಳು ಶೇ. ೮೦ರಷ್ಟು ಜನ ಸಂಕೇತಿ ಭಾಷೆಯನ್ನು ಕೈಬಿಟ್ಟಿದ್ದಾರೆ. ಅದರ ಪ್ರಭಾವದಿಂದಾಗಿ ಹಳ್ಳಿಯಲ್ಲಿ ಇರುವವರೂ ಸಂಕೇತಿ ಭಾಷೆಯನ್ನು ಉಪೇಕ್ಷಿಸುವಂತಾಗಿದೆ. ಒಟ್ಟಿನಲ್ಲಿ ಇನ್ನು ೨೦-೩೦ ವರ್ಷಗಳಲ್ಲಿ ಈ ಭಾಷೆಯು ಪೂರ್ತಿಯಾಗಿ ಕಣ್ಮರೆಯಾಗುವ ಸ್ಥಿತಿ ಬಂದಿದೆ.

ಕೇವಲ ಸಂಕೇತಿ ಭಾಷೆಯ ಮೇಲಿನ ಅಭಿಮಾನದಿಂದ ಕಳೆದ ಕೆಲವು ದಶಕಗಳಲ್ಲಿ ಕೆಲವು ಆಸಕ್ತರು ಮಾಡಿದ ವಿವಿಧ ರೀತಿಯ ಬಿಡಿಪ್ರಯತ್ನಗಳು ಗಮನಾರ್ಹವಾದುವೇನೋ ಹೌದು. ಅದಕ್ಕೊಂದು ಸಾಮೂಹಿಕ ಸಮ್ಮತಿಮುದ್ರೆ ಬಿದ್ದುದು ಶ್ರೀ ಭಾನುಪ್ರಕಾಶರ ನೇತೃತ್ವದಲ್ಲಿ ನಡೆದ ವಿಶ್ವಸಂಕೇತಿ ಸಮ್ಮೇಳನದಲ್ಲಿ. ಅದಕ್ಕೆ ಸಾಂಸ್ಥಿಕ ಚಾಲನೆ ಸಿಕ್ಕಿದ್ದು ಡಾ. ಬಿ.ಎಸ್. ಪ್ರಣತಾರ್ತಿಹರನ್ ಅವರು ನಡೆಸಿದ ಇ-ಮಾಗಜಿನ್‌ನಲ್ಲಿ, ಸಂಕೇತಿ ಅಕಾಡಮಿ ತಂದ ಕಿರು ಹೊತ್ತಗೆಗಳಲ್ಲಿ. ಇದೀಗ ಅದು ದೊಡ್ಡ ಸಾಹಿತ್ಯಿಕ ಪ್ರಯತ್ನವಾಗಿ ‘ಸಾರ್ಥು’ವಿನ ರೂಪದಲ್ಲಿ ಕಾಣಿಸಿಕೊಂಡಿದೆ.

ಶೆಂಗೊಟ್ಟೈನಿಂದ ನಡೆದ ಮಹಾವಲಸೆಯಾದ ಮೇಲೆ ಕನ್ನಡ ನಾಡಿನಲ್ಲಿ ನೆಲೆಸಿದ ಸಂಕೇತಿಗಳು ಕನ್ನಡವನ್ನು ಮೈಗೂಡಿಸಿಕೊಳ್ಳುತ್ತ ಬಂದರು. ಬರುಬರುತ್ತ ಅವರ ಮನೆಯ ಮಾತು ಸಂಕೇತಿಯಾದರೆ ಬಯಲಮಾತು ಕನ್ನಡವಾಯಿತು. ಮನೆಯ ಮಾತಾದ ಸಂಕೇತಿಯು ಕನ್ನಡೀಕರಣಗೊಳ್ಳುತ್ತ ಹೋಯಿತು. ೨೦ನೆಯ ಶತಮಾನದಲ್ಲಿ ಈ ಪ್ರಕ್ರಿಯೆ ದಶಕದಿಂದ ದಶಕಕ್ಕೆ ವೇಗವನ್ನು ಪಡೆದುಕೊಂಡಿತು. ಈಗಿನ ಸ್ಥಿತಿಯೆಂದರೆ ಸಂಕೇತಿ ಭಾಷೆಯನ್ನಾಡುವುದು ಅಪಮಾನವೆಂದು ಭಾವಿಸುವುದು. ಅದೊಂದು ಗೌರವದ ಭಾಷೆ ಅಲ್ಲವೆಂದು ಅದರ ವಾರಸುದಾರರೇ ತಿಳಿದಿರುವುದು. ಅಯಾಚಿತವಾಗಿ ಮೈಗೂಡಿಬರುತ್ತಿದ್ದ ಒಂದು ಭಾಷೆಯ ಜ್ಞಾನವನ್ನು ಅನಾಯಾಸವಾಗಿ ಕಳೆದುಕೊಂಡಿರುವುದು.

ಇಂಥ ಹೊತ್ತಿನಲ್ಲಿ ಒಂದು ಕಡೆ ಸಂಕೇತಿ ಭಾಷೆಯ ನಿಘಂಟೊಂದನ್ನು ಸಿದ್ಧಪಡಿಸುವ ಮಹಾಕಾರ್ಯದಲ್ಲಿ ಪ್ರೊ. ಎಲ್.ಎಮ್.ಎಲ್. ಶಾಸ್ತ್ರೀ ತೊಡಗಿಕೊಂಡಿದ್ದಾರೆ. ನಿಘಂಟೊಂದಕ್ಕೆ ಆಧಾರವಾಗಬಹುದಾದ ಸಂಕೇತಿ ಗ್ರಂಥವೊಂದನ್ನು ಹರನ್ ಸಿದ್ಧಪಡಿಸಿದ್ದಾರೆ. ಇಷ್ಟು ದೀರ್ಘಕಾಲ ಆಡುಮಾತಾಗಿಯೇ ಉಳಿದಿರುವ ಭಾಷೆಯಲ್ಲಿ ಪದಗಳು ಅಪಭ್ರಂಶಗೊಂಡಿರುವುದು ಸಹಜವಾಗಿದೆ. ಆದರೂ ಈಗಲೂ ತಮಿಳುನಾಡಿನ ಬ್ರಾಹ್ಮಣರು ಆಡುವ ತಮಿಳುಭಾಷೆ ಸಂಕೇತಿಭಾಷೆಗೆ ಹತ್ತಿರವಾಗಿಯೇ ಇದೆ, ಸಂವಹನಸಾಧ್ಯತೆಯೂ ಇದೆ. ಇದೊಂದು ಸೋಜಿಗ. ಆದ್ದರಿಂದಲೇ ಸಂಕೇತಿ ಭಾಷೆಯ ಮರುಚಾಲನೆಗೆ ಕಾಲ ಮೀರಿಲ್ಲವೆನ್ನುಬಹುದು. ಇದಕ್ಕಾಗಿ ನಿಘಂಟೂ ಬೇಕು, ಸಾಹಿತ್ಯವೂ ಬೇಕು; ಜತೆಗೆ ಸಂಕೇತಿ ಸಂಘಗಳೂ ಪತ್ರಿಕೆಗಳೂ ಕಟಿಬದ್ಧರಾಗಬೇಕು; ‘ಸಂಕೇತಿ’ ಎನ್ನುವುದು ಒಂದು ಪೂರ್ಣಭಾಷೆ ಎಂಬ ಭಾಷಾವಿಜ್ಞಾನಿಗಳ ಮಾತಿಗೆ ಕಿವಿಗೊಟ್ಟು ಸಂಕೇತಿಗಳು ತಮ್ಮ ಕೀಳರಿಮೆಯನ್ನು ಬದಿಗೊತ್ತಬೇಕು.

ಕಳೆದ ಮೂರು ದಶಕಗಳಿಂದ ಅವಿರತವಾಗಿ ಮಾಡಿಕೊಂಡು ಬಂದ ಬಿಡಿಪ್ರಯತ್ನಗಳ ಮುಂದುವರಿಕೆಯಾಗಿ ಹರನ್ ಈ ಮಹಾಕೃತಿಯನ್ನು ಸಂಕೇತಿಭಾಷೆಗೆ ತಂದಿದ್ದಾರೆ. ಪದ್ಯಗಳನ್ನೂ ಗದ್ಯಲೇಖನಗಳನ್ನೂ ಬರೆದ ಅನುಭವ ಅವರಿಗಿದೆ. ಇ-ಮಾಗಜಿನ್ ನಡೆಸಿದ ಸಂದರ್ಭದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಂದ ಸಂಕೇತಿಭಾಷೆಗೆ ಅನುವಾದ ಮಾಡಿದ ಅನುಭವವೂ ಇದೆ. ಇಂಥ ಹೊತ್ತು ಅವರು ಸಂಕೇತಿಭಾಷೆಯ ಸತ್ವವನ್ನೂ ಶಕ್ತಿಯನ್ನೂ ಚೆನ್ನಾಗಿಯೇ ಮನಗಂಡಿದ್ದಾರೆ, ಆ ದೃಢವಾದ ಜ್ಞಾನ ಮತ್ತು ಅದರಿಂದ ಹುಟ್ಟಿದ ಆತ್ಮವಿಶ್ವಾಸದ ಬಲದಿಂದಲೇ ಭೈರಪ್ಪನವರಂಥ ಮಹಾಕಾದಂಬರಿಕಾರರ ಸಂಕೀರ್ಣಕೃತಿಯೊಂದನ್ನು ಸಂಕೇತಿಗೆ ಅನುವಾದಿಸಿದ್ದಾರೆ. ಅಂಥದೊಂದು ಕೃತಿಯನ್ನು ಧರಿಸಬಲ್ಲ ಶಕ್ತಿ ಸಂಕೇತಿಭಾಷೆಗೆ ಇದೆ ಎಂದು ಸ್ಥಾಪಿಸಿದ್ದಾರೆ.

ಸಾರ್ಥು ಕೃತಿಯ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಎಲ್ಲ ಗಣ್ಯರೂ ಈ ಕೃತಿಯ ಸಾರ್ಥಕ ಅನುವಾದದ ಬಗೆಗೆ ಮೆಚ್ಚಿ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಭಾಷಾಶಾಸ್ತ್ರಜ್ಞ ಡಾ. ಕೆ.ಎಸ್. ನಾಗರಾಜ್ ಗುರುತಿಸಿದ ಅಂಶಗಳು ಹೀಗಿವೆ.

೧. ಸಾಮಾನ್ಯವಾಗಿ ಮುಖ್ಯಭಾಷೆಗಳ ನಡುವೆಯೇ ಅನುವಾದಗಳು ನಡೆಯುತ್ತವೆ. ಆದರೆ ಚಿಕ್ಕಸಮುದಾಯವಾದ ಸಂಕೇತಿಗಳ ಭಾಷೆಗೆ ಅನುವಾದವಾಗುತ್ತಿರುವುದು ಒಂದು ವಿಶೇಷವಾಗಿದೆ.
೨. ಸಂಕೇತಿಭಾಷೆಯನ್ನು ಬಳಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾಷೆ ಉಳಿಯಬೇಕಾದರೆ ಸಂಕೇತಿಗಳೇ ತಮ್ಮನ್ನು ಬದಲಾಯಿಸಿಕೊಳ್ಳಬೇಕು ಮತ್ತು ಸಂಕೇತಿಭಾಷೆಯನ್ನು ಬೆಳೆಸಬೇಕು.
೩. ಸಂಕೇತಿಭಾಷೆ ಹಿಂದಿನದಕ್ಕಿಂತ ಬಹಳ ಬದಲಾಗಿದೆ. ಸಂಕೇತಿಭಾಷೆಗೆ ಲಿಪಿ ಇಲ್ಲ, ಹೀಗಾಗಿ ಸಾಹಿತ್ಯವೂ ಇಲ್ಲ. ಸಾಹಿತ್ಯವಿಲ್ಲದ ಭಾಷೆ ಸಾಯುತ್ತದೆ.
೪. ಕರ್ನಾಟಕದಲ್ಲಿ ೩೧ ಆದಿಭಾಷೆಗಳು ಅಳಿವಿನ ಅಂಚಿನಲ್ಲಿವೆ. ಅವುಗಳಲ್ಲಿ ಸಂಕೇತಿಯೂ ಒಂದು. ಇಂಥ ಹೊತ್ತಿನಲ್ಲಿ ಈ ಅನುವಾದಕಾರ್ಯ ನಡೆದಿರುವುದು ಶ್ಲಾಘ್ಯವಾಗಿದೆ.
೫. ಸಂಕೇತಿಭಾಷೆಯಲ್ಲಿಯೇ ಸ್ವತಂತ್ರಕೃತಿಗಳು ಬರಬೇಕು. ಇದರಿಂದ ಪಠ್ಯಪುಸ್ತಕಗಳ ರಚನೆಗೆ ಅನುಕೂಲವಾಗುತ್ತದೆ.

ಬಹಳ ಉತ್ತೇಜಕವಾಗಿ ಮಾತನಾಡಿದ ಡಾ. ಎಸ್.ಎಲ್. ಭೈರಪ್ಪನವರು ಸಂಕೇತಿಗಳ ಜತೆಗಿನ ಒಡನಾಟವನ್ನೂ, ಅವರ ಅತಿಥಿಸತ್ಕಾರದ ರೀತಿಯನ್ನೂ, ಬಹು ಸಣ್ಣ ಸಮುದಾಯದವರಾದರೂ ಅವರು ಮಾಡಿರುವ ವಿವಿಧ ಕ್ಷೇತ್ರಗಳ ಸಾಧನೆಯನ್ನೂ ಬಣ್ಣಿಸಿದರು.

೧. ಯಾವುದೇ ಭಾಷೆ ಮತ್ತು ಸಂಸ್ಕೃತಿ ಗಟ್ಟಿಯಾಗಿ ನೆಲೆನಿಲ್ಲಲು ಅನುವಾದಗಳಿಂದ ಸಾಧ್ಯ. ಭಾಷೆಯ ಸೊಗಡೂ ಗೌರವವೂ ಇದರಿಂದ ಹೆಚ್ಚುತ್ತದೆ.
೨. ಇನ್ನು ಮುಂದೆ ಅನನ್ಯತೆಯ ಗುರುತಾಗಿ ಉಳಿಯಬಹುದಾದುದು ಭಾಷೆ; ಜಾತಿಯಲ್ಲ. ಹಾಗಾಗಿ ಭಾಷೆಯನ್ನು ಉಳಿಸಿಕೊಳ್ಳಬೇಕು.
೩. ವಿಶೇಷವಾಗಿ ಕಥೆ, ಕವನ, ನಾಟಕಗಳನ್ನು ಬರೆದು ಭಾಷೆಯನ್ನು ಭದ್ರಗೊಳಿಸಿಕೊಳ್ಳಬೇಕು.

ಇವು ಭೈರಪ್ಪನವರು ಕೊಟ್ಟ ಸಲಹೆಗಳು.
ಸೃಜನಶೀಲಸಾಹಿತ್ಯದ ಉನ್ನತಶಿಖರದಂತಿರುವ ಎಸ್.ಎಲ್. ಭೈರಪ್ಪನವರೊಂದಿಗೆ ಶಾಸ್ತ್ರ ಮತ್ತು ಸಂಶೋಧನ ಸಾಹಿತ್ಯದ ಮೇರುಶಿಖರ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳು ಭಾಗವಹಿಸಿದ್ದೊಂದು ಐತಿಹಾಸಿಕ ಘಟನೆ. ಸಾರ್ಥು ಕೃತಿಗೆ ಹರನ್ ಬರೆದಿರುವ ವಿಸ್ತಾರವಾದ ಉಪೋದ್ಘಾತವನ್ನು ಎಸ್.ಎಲ್. ಭೈರಪ್ಪನವರಂತೆಯೇ ಶಾಸ್ತ್ರಿಗಳೂ ಮೆಚ್ಚಿಕೊಂಡರು. ಎಸ್.ಎಲ್. ಭೈರಪ್ಪನವರು, ಹರನ್ ಕಾದಂಬರಿಯ ಆಶಯವನ್ನು ಸರಿಯಾಗಿ ಗ್ರಹಿಸಿದ್ದಾರೆಂದು ಮೆಚ್ಚಿಕೊಂಡರೆ, ಶಾಸ್ತ್ರಿಗಳು ಉಪೋದ್ಘಾತದ ಭಾಷೆ, ಶೈಲಿ ಮತ್ತು ಗಂಭೀರ ಪ್ರಯತ್ನವನ್ನು ಮೆಚ್ಚಿ ಹರನ್ ತಮ್ಮ ಶಿಷ್ಯನೆಂದು ಹೇಳಿಕೊಳ್ಳಲು ಹೆಮ್ಮೆ ಎಂದು ಶ್ಲಾಘಿಸಿದರು. ಉಪೋದ್ಘಾತದ ಕೆಲವು ಭಾಗಗಳನ್ನು ಉಲ್ಲೇಖಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು. ಹರನ್ ಅವರು ತಪಸ್ಸಿನಂತೆ ಕಾರ್ಯಮಗ್ನರಾಗುತ್ತಾರೆಂದು ಕೊಂಡಾಡಿದ ಶಾಸ್ತ್ರಿಗಳು ನಮಗೆ ಬಳುವಳಿಯಾಗಿ ಬಂದ ಭಾಷೆಗಳನ್ನು ಯಾಕಾದರೂ ಕೈಚೆಲ್ಲಿಕೂರಬೇಕು ಎಂದು ವಿಸ್ಮಯದಿಂದ ಪ್ರಶ್ನಿಸಿದರು. ಸಂಕೇತಿಭಾಷೆಯನ್ನು ಆ ಸಮುದಾಯ ಉಳಿಸಿಕೊಂಡಿದ್ದು ಉತ್ಸಾಹದಿಂದ ಬಳಸುವ ರೀತಿಯನ್ನು ಕಂಡು ಮೆಚ್ಚಿರುವುದಾಗಿಯೂ ಹೇಳಿದರು. ಒಟ್ಟಿನಲ್ಲಿ ಸಂಕೇತಿಭಾಷೆಯ ಉಳಿವಿಗಾಗಿ ‘ಸಾರ್ಥು’ ಮೂಲಕ ಮಾಡಿರುವ ಅನುವಾದಪ್ರಯತ್ನವನ್ನು ಈ ಇಬ್ಬರು ಸಾಹಿತ್ಯಶ್ರೇಷ್ಠರೂ ಉತ್ತೇಜಿಸಿದರು.
- ಡಾ. ಎಂ.ಎಸ್. ವಿಜಯ