‘ಸಾರ್ಥು’ ಅನುವಾದ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅನುವಾದಕರಾದ  ಡಾ. ಹರನ್ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣ.

ಸನ್ಮಾನ್ಯ ಅಧ್ಯಕ್ಷರೆ, ಗಣ್ಯರೆ, ಬಂಧುಗಳೆ,
300-x-200ಸಂಕೇತಿಭಾಷೆಯಲ್ಲಿ ಒಳ್ಳೆಯ ಕೃತಿಯೊಂದು ಬರಬೇಕೆಂದು ಸಂಕಲ್ಪವನ್ನೇಕೆಮಾಡಿದೆ, ಅದಕ್ಕಾಗಿ ಭೈರಪ್ಪನವರ ಕೃತಿಯೊಂದನ್ನು ಅನುವಾದಿಸಬೇಕೆಂದು ಏಕೆ ನಿರ್ಣಯಿಸಿದೆ, ಭಾಷಾಂತರದ ಹೊತ್ತು ಒದಗಿ ಬಂದ ಸೌಲಭ್ಯಗಳಾವುವು, ಎದುರಾದ ಸವಾಲುಗಳಾವುವು, ಅವನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ‘ಸಾರ್ಥು’ ಕೃತಿಯ ‘ಅರಿಕೆ’ಯಲ್ಲಿ ವಿಸ್ತಾರವಾಗಿ ನಿವೇದಿಸಿಕೊಂಡಿದ್ದೇನೆ. ಆ ಬಗೆಗೆ ನಾನಿಲ್ಲಿ ಮಾತಾಡಬೇಕಾದುದಿಲ್ಲ.

ಆದರೆ ನೀವೆಲ್ಲರೂ ಎರಡು ಪ್ರಶ್ನೆಗಳನ್ನು ಕೇಳಿದ್ದೀರಿ. ಅದರ ಬಗ್ಗೆ ಯೋಚಿಸಬೇಕಾಗಿದೆ.

ಸಂಕೇತಿಭಾಷೆ ಬಾರದ ಕನ್ನಡಿಗರು, ‘ನಮಗೆ ಸಂಕೇತಿಭಾಷೆ ಬಾರದು, ಈ ಪುಸ್ತಕದಿಂದ ನಮಗೇನು’ ಎಂದು ಕೇಳಿದ್ದೀರಿ. ಸಂಕೇತಿಭಾಷೆ ತಿಳಿದಿರುವ ಕನ್ನಡಿಗರು, ‘ನಾವು ಭೈರಪ್ಪನವರ ಪುಸ್ತಕವನ್ನು ಕನ್ನಡದಲ್ಲಿಯೇ ಓದಿಕೊಂಡಿದ್ದೇವೆ, ಇನ್ನೇಕೆ ಸಂಕೇತಿಯಲ್ಲೋದಬೇಕು?’ ಎಂದು ಕೇಳಿದ್ದೀರಿ. ಎರಡು ಪ್ರಶ್ನೆಗೂ ಇರುವ ಉತ್ತರ ಒಂದೇ, ‘ಭೈರಪ್ಪನವರ ಪುಸ್ತಕವನ್ನೇ ಅನುವಾದಕ್ಕಾಗಿ ಆರಿಸಿಕೊಂಡ ಪ್ರಧಾನ ಉದ್ದೇಶವೇ, ಅವರ ಕಾದಂಬರಿಗಳನ್ನು ಎಲ್ಲರೂ ಓದಿಯೇ ಇರುತ್ತಾರೆ ಎಂಬುದು. ಹೀಗೆ ಕಥೆ ತಿಳಿದಿರುವುದರಿಂದ ಪಾತ್ರಗಳು ಮತ್ತು ಘಟನೆಗಳ ಪರಿಚಯವಾಗಿರುವುದರಿಂದ ಹೊಸದಾದ ಅನ್ಯಭಾಷೆಯೊಂದಕ್ಕೆ ಪ್ರವೇಶವು ಸುಲಭವಾಗುತ್ತದೆ. ಹೊಸ ಭಾಷೆಯ ಬಾಗುಬಳುಕನ್ನೂ ಬನಿಯನ್ನೂ ಸವಿಯಲು ಅನುಕೂಲವಾಗುತ್ತದೆ. ಅನ್ಯಭಾಷೆಯಲ್ಲಿ ಮೈವೆತ್ತ ಕಾದಂಬರಿಯು ಪಡೆಯುವ ವಿಶಿಷ್ಟ ಪರಿವೇಶವನ್ನು ಆಸ್ವಾದಿಸಲು ಅನುವಾಗುತ್ತದೆ.

ಈ ಕೃತಿ ಇರುವುದು ಕನ್ನಡಲಿಪಿಯಲ್ಲಿ. ಅದೊಂದು ವಿಶೇಷ ಅನುಕೂಲ. ಸಂಕೇತಿಭಾಷೆಗೆ ಲಿಪಿಯಿಲ್ಲ; ಅವರಿಗೆ ತಮಿಳು ಅಥವಾ ಮಲೆಯಾಳಂ ಲಿಪಿ ತಿಳಿಯದು; ಹಾಗಾಗಿ ಕನ್ನಡಲಿಪಿಯನ್ನೇ ಬಳಸಲಾಗಿದೆ ಅನ್ನುವುದು ಒಂದು ತಾಂತ್ರಿಕ ಅಂಶ ಅಷ್ಟೆ. ಆದರೆ ಇದೊಂದು ಅನ್ಯಭಾಷಾಪ್ರವೇಶತಂತ್ರದ ಅಭಿಯಾನವಾಗಬಾರದೇಕೆ ಎಂಬುದು ಆಶಯ. ಎಲ್ಲ ದ್ರಾವಿಡಭಾಷೆಗಳ ಮೂಲಕೃತಿಗಳೂ ಕನ್ನಡಲಿಪಿಯಲ್ಲಿ ಬರುವುದಾದರೆ ಅನ್ಯಭಾಷಾ ತಿಳಿವಿಗೆ ಬಾಗಿಲು ತೆರೆದಂತೆ. ಇನ್ನೊಂದು ಭಾಷೆ, ಅಲ್ಲಿನ ಸಂಸ್ಕೃತಿ, ಸಾಹಿತ್ಯ ಮಾತ್ರವಲ್ಲ ಭಾವೈಕ್ಯಕ್ಕೂ ಅದು ಸಾಧನವಾಗುತ್ತದೆ. ಹಾಗೆಯೇ ಕನ್ನಡದ ಕೃತಿಗಳೂ ಮೂಲರೂಪದಲ್ಲಿ ಅನ್ಯಲಿಪಿಗಳಿಗೆ ಹೋಗಬೇಕು. ಅನುವಾದಗಳಿಂದ ಆಗುವಂತೆಯೇ ಇದರಿಂದಲೂ ಭಾಷಾ ಬೆಳವಣಿಗೆ ಆಗಿಯೇ ಆಗುತ್ತದೆ. ಸಂಸ್ಕೃತಸಾಹಿತ್ಯದ ಅನೇಕ ಭಾಗವು ಈಗಾಗಲೇ ಕನ್ನಡ ಲಿಪಿಯಲ್ಲಿ ಬಂದಿರುವುದನ್ನು ನೆನೆಯೋಣ. ವಿದೇಶಗಳಲ್ಲಿ ಇಂಗ್ಲಿಷ್ ಮಾತನಾಡುವವರ ನಡುವೆ ಇರುವಾಗ ನಮ್ಮ ನೆರೆಯ ರಾಜ್ಯದ ಭಾರತೀಯನೊಬ್ಬನನ್ನು ಸಂಧಿಸಿದರೆ ನಮ್ಮ ದೇಶಭಕ್ತಿ ಉಕ್ಕುತ್ತದೆ, ಅಭಿಮಾನ ಮಡುಗಟ್ಟುತ್ತದೆ. ಆದರೆ ಅವನನ್ನು ಇಂಗ್ಲಿಷ್‌ಭಾಷೆಯಲ್ಲಿ ಮಾತಾಡಿಸಬೇಕಾದ ಅನಿವಾರ್ಯತೆಯಿಂದಾಗಿ ಮುಜುಗರ ಉಂಟಾಗುತ್ತದೆ, ಮೊದಲಬಾರಿಗೆ ನಮ್ಮ ದೇಶೀಯತೆಯೇ ಪ್ರಶ್ನೆಗೆ ಈಡಾದ ಅನುಭವವಾಗುತ್ತದೆ. ಭಾರತದ ನಮ್ಮ ನೆರೆಯ ಭಾಷೆಯ ನಡುವೆ ಇರುವ ಗೋಡೆಯನ್ನು ಲಿಪ್ಯಂತರದ ಮೂಲಕ ಒಡೆದರೆ ಭಾಷೆಗೂ ಅನುಕೂಲ, ಭಾವಕ್ಕೂ ಅನುಕೂಲ.

ಕನ್ನಡಲಿಪಿಯಲ್ಲಿರುವ ಅನ್ಯಭಾಷೆಯ ಕೃತಿಯನ್ನು ಓದುವುದು ಕಷ್ಟವಲ್ಲವೆ ಎಂಬುದು ಇನ್ನೊಂದು ಪ್ರಶ್ನೆ. ಅದನ್ನು ಕನ್ನಡಲಿಪಿಯಲ್ಲಿರುವ ಸಂಕೇತಿಲೇಖನದ ಬಗೆಗೆ ಸಂಕೇತಿಗಳೇ ಕೇಳಿದಾಗ ವಿಪರ್ಯಾಸದ ತೀವ್ರತೆ ಹೆಚ್ಚುತ್ತದೆ. ಮೊದಲು ಇದನ್ನು ನನ್ನ ಮೇಲೆಯೇ ಪ್ರಯೋಗಿಸಿಕೊಂಡಿದ್ದೇನೆ; ಆಮೇಲೆ ಬೆರಳಚ್ಚು ಮಾಡಿದ ಹಾಳೆಗಳನ್ನು ನಾಲ್ಕು ಜನಕ್ಕೆ ಹಂಚಿ, ಓದಿಸಿ, ಪ್ರತಿಕ್ರಿಯೆ ಕೇಳಿದ್ದೇನೆ. ಜೆರಾಕ್ಸ್ ಅಂಗಡಿಯಲ್ಲಿದ್ದ ಕನ್ನಡಮಾತ್ರ ತಿಳಿದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಸಂಕೇತಿ ಭಾಷೆಯ ವ್ಯಂಜನಾಂತ ಪದಗಳನ್ನೂ ವಾಕ್ಯಾಂತಗಳನ್ನೂ ಸರಿಯಾಗಿಯೇ ಉಚ್ಚರಿಸಿ ನಿರರ್ಗಳವಾಗಿ ಓದಿದುದನ್ನು ಕಂಡು ಧೈರ್ಯತಾಳಿದ್ದೇನೆ. ಈ ಪುಸ್ತಕದ ಪ್ರಕಾಶಕರಾದ ಸಂಸ್ಕೃತಿ ಸುಬ್ರಹ್ಮಣ್ಯ ಅವರು ಅಪ್ಪಟ ಕನ್ನಡಿಗರು; ತಮಿಳಾಗಲಿ, ಮಲೆಯಾಳವಾಗಲಿ ತಿಳಿಯದವರು. ಆದರೆ ಇಡೀ ಸಾರ್ಥು ಕೃತಿಯ ಕರಡು ತಿದ್ದಿದ್ದಾರೆ.

ಅನೇಕ ಸಂಕೇತಿ ಪದಗಳ ಸರಿಯಾದ ರೂಪದ ಬಗೆಗೆ ನನಗೆ ಸಲಹೆ ನೀಡಿದ್ದಾರೆ.

ಮುಖ್ಯವಾಗಿ ಪ್ರೀತಿಬೇಕು! ಮೊದಲ ನಾಲ್ಕು ಪುಟಗಳನ್ನು ಕಷ್ಟಪಟ್ಟು ಓದಿ ಮೈಗೂಡಿಸಿಕೊಳ್ಳಿ, ಹತ್ತು ಪುಟ ಓದುವಷ್ಟರಲ್ಲಿ ಅದರಲ್ಲಿ ಒಂದಾಗುತ್ತೀರಿ. ಹೊಸಭಾಷೆಯ ಸಂಗೀತಕ್ಕೆ ಶ್ರುತಿಮಾಡಿಕೊಂಡು ಮುನ್ನಡೆಯಿರಿ. ಅದು ನಿಮ್ಮನ್ನು ಅಪ್ಪಿಕೊಳ್ಳುತ್ತದೆ.

ಜಗತ್ತಿನಲ್ಲಿರುವ ಹೆಂಗಸರೆಲ್ಲಾ ತಾಯಿಗೆ ಸಮಾನ ಎಂದು ಹೇಳುವುದು ಒಂದು ದೊಡ್ಡ ನೆಲೆಯ ಭಾವ. ಆದರೆ ಹೆತ್ತ ತಾಯಿಯನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿ ಅವಳು ಕೊನೆಯುಸಿರೆಳೆಯುವುದನ್ನು ಸಂತೋಷದಿಂದ ನೋಡುತ್ತ ಕೂರುವವನಿಗೆ ಆ ಮಾತು ಹೇಳುವ ಅಧಿಕಾರವಿರುವುದಿಲ್ಲ. ಸಂಕೇತಿಗಳಿಗೆ ಕನ್ನಡದಲ್ಲಿ ಪ್ರೀತಿ ಇದೆ, ಸಂಸ್ಕೃತದಲ್ಲಿ ಭಕ್ತಿ ಇದೆ, ಇಂಗ್ಲಿಷ್‌ನಲ್ಲಿ ವಿಶ್ವಾಸವಿದೆ; ಇತ್ತೀಚೆಗೆ ಸ್ಪ್ಯಾನಿಷ್ ಜತೆಗೆ ಪ್ರಣಯ ಪ್ರಾರಂಭವಾಗಿದೆ. ಆದರೆ ಅವರ ಸಂಕೇತಿಭಾಷೆ ದನದ ಕೊಟ್ಟಿಗೆಯಲ್ಲಿ ಮಲಗಿ ಕೊನೆಯುಸಿರು ಎಳೆಯುತ್ತಿದೆ!

ಭೈರಪ್ಪನವರ ಕಾದಂಬರಿಯ ವಿಮರ್ಶೆಗೆ ತೊಡಗುವ ಹೊತ್ತಲ್ಲ ಇದು, ನಾನೂ ಹಾಗೆ ಮಾಡುವುದಿಲ್ಲ. ಆದರೆ ಸಂಕೇತಿಭಾಷೆಯ ಪುನರುತ್ಥಾನಕ್ಕಾಗಿ ಭೈರಪ್ಪನವರ ಕೃತಿಯ ಮೂಲಕ ಎಂಥ ಸುಸಂಧಿ ಒದಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಒಂದು ಅಂಶದ ಕಡೆಗೆ ತಮ್ಮೆಲ್ಲರ ಗಮನ ಸೆಳೆಯಬಯಸುತ್ತೇನೆ.

೧. ಮೊದಲು ನಮಗೆ ಬೇಕಾದುದು ಮನೋರಂಜನೆ. ಭೈರಪ್ಪನವರ ಕಾಥಾನಿರೂಪಣೆಯ ಕೌಶಲ ಅಪೂರ್ವ ರೀತಿಯದು. ಅದು ಓದುಗನನ್ನು ಸೆಳೆಯುತ್ತದೆ, ಆಲಂಗಿಸುತ್ತದೆ, ಮೈಮರೆಸುತ್ತದೆ, ಕರಗಿಸಿಕೊಂಡುಬಿಡುತ್ತದೆ. ನಾಲ್ಕನೆಯ ಬಾರಿಯಲ್ಲ ಇಪ್ಪತ್ತನೆಯ ಬಾರಿ ಓದಿದಾಗಲೂ ಹೀಗೆಯೇ ಆಗುತ್ತದೆ.

೨. ಮಾನವನ ಬದುಕಿನ ಮೂಲಭೂತ ತತ್ತ್ವಗಳನ್ನೂ ಜೀವನರಹಸ್ಯದ ತಳಹದಿಗಳನ್ನೂ ಮುಲಾಜಿಲ್ಲದೆ ಅನ್ವೇಷಿಸುವ ಸತ್ಯಾನ್ವೇಷಣಪ್ರವಾಹವೇ ಅವರ ಬರಹಗಳು. ಈ ಪ್ರವಾಹವು ಸ್ವಾಚ್ಛಂದ್ಯದ್ದಲ್ಲ, ಅದಕ್ಕೊಂದು ಭದ್ರವಾದ ಚೌಕಟ್ಟಿದೆ. ಮನಶ್ಶಾಸ್ತ್ರ, ತತ್ತ್ವಶಾಸ್ತ್ರ, ತರ್ಕಶಾಸ್ತ್ರ, ಸೌಂದರ್ಯಮೀಮಾಂಸೆಯ ಆಳವಾದ ಅಧ್ಯಯನದ ಬಲವಿದೆ; ಯಾವುದೋ ಕುಗ್ರಾಮದಲ್ಲಿ ಹುಟ್ಟಿ ಪಡೆದ ತೃಣಮೂಲ ಅನುಭವಗಳ ಜತೆಗೆ ಜಗತ್ತಿನ ಮೂಲೆಮೂಲೆಯನ್ನು ಸುತ್ತಿದ ಅನುಭವವಿದೆ. ಅಗಾಧವಾದ ಓದೂ ಇದೆ. ಇದೆಲ್ಲದರ ಮೇಲೆ ಪ್ರಖರಚಿಂತನ ಇದೆ. ಇದೆಲ್ಲದರ ಬಲದಿಂದ ಸತ್ಯವನ್ನು ಮತ್ತು ಆತ್ಯಂತಿಕ ಸತ್ಯವನ್ನೇ ಹಿಡಿಯುವ ಧೃತಿ ಇದೆ. ಹೀಗೆ ಸತ್ಯ ಮತ್ತು ಸೌಂದರ್ಯ, ಶಿವ ಮತ್ತು ಶಕ್ತಿ ಭೈರಪ್ಪನವರಿಗೆ ಒಲಿದ ವರ.

೩. ಈ ಗುಣದ ಬಲದಿಂದಾಗಿ ತಾನಾಗಿಯೇ ಸಹಜವಾಗಿ ಸಿದ್ಧಿಸಿದ ಸಾವಯವಸಂಬಂಧವು ಅದ್ಭುತವಾದುದು. ಅಲ್ಲಿ ಸಾಂದ್ರತೆ ಇದೆ, ಔಚಿತ್ಯಪ್ರಜ್ಞೆ ಇದೆ, ಪ್ರಮಾಣ ಸಮತೋಲವಿದೆ.
ಇವೆಲ್ಲದರ ಸಂಗಮ ಮತ್ತು ನಾವು ಹಿಡಿದಿಡಲು ಆಗದೇ ಹೋಗಿರುವ ಯಾವುದೋ ಸೃಷ್ಟಿಕೌಶಲದ ವಿಶೇಷಗುಣದಿಂದಾಗಿ ಭೈರಪ್ಪನವರ ಕೃತಿಗಳು ಉನ್ನತವಾದುವಾಗಿವೆ.
ಅನೇಕವೇಳೆ ಈ ರಹಸ್ಯವನ್ನು ಪತ್ತೆಮಾಡುವ ಸಾಹಸಗಳು ನಡೆದಿವೆ. ಸೊಗಸಾಗಿ ಕಳಿತ ಮಾವಿನಹಣ್ಣನ್ನು ಕೈಗೆತ್ತಿಕೊಂಡು ಮೂಸಿ ‘ಓಹೊ? ಇದು ರಸಪುರಿಯೊ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದೇವೆ. ನೆಕ್ಕಿ ಅದರ ಸವಿಗೆ ಮಾರು ಹೋಗಿದ್ದೇವೆ, ಚಪ್ಪರಿಸಿ ತಿಂದು ಮುಗಿಸಿದ್ದೇವೆ. ಓಟೆಯನ್ನೂ ನೆಕ್ಕಿ ಸವರಿದ್ದೇವೆ. ಕೊನೆಗೆ ‘ಛೀ ಇದು ಓಟೆ. ಹಣ್ಣು ಎಂದುಕೊಂಡುಬಿಟ್ಟಿದ್ದೆ. ಸುವಾಸನೆಯಾಗಲಿ ರುಚಿಯಾಗಲಿ ಇಲ್ಲದ ಕಸ ಎಂದು ಬಿಸಾಕಿಬಿಟ್ಟಿದ್ದೇವೆ. ನಿಜವಾಗಿ ಭೈರಪ್ಪನವರ ಕೃತಿಗಳ ಸತ್ವವಿರುವುದು ಈ ಓಟೆಯಲ್ಲಿ. ಅದು ಬಿಸಾಕಿದ ಎಡೆಯಲ್ಲೇ ಮತ್ತೆ ಮೊಳೆತು ಮರವಾಗಿ ಸಾವಿರಾರು ಹಣ್ಣುಗಳನ್ನು ಕೊಡುತ್ತದೆ. ಮತ್ತೆ ಮತ್ತೆ ಹೀಗೆಯೇ ನಡೆಯುತ್ತದೆ. ಹಾಗೆಂದೇ ಜನ ಅವರ ಕೃತಿಗಳನ್ನು ಹತ್ತಲ್ಲ ಇಪ್ಪತ್ತು ಸರಿ ಓದುತ್ತಿದ್ದಾರೆ.

ಇಂದು ಜಗತ್ತಿನ ಅತ್ಯುತ್ತಮ ಕಾದಂಬರಿಗಳು ಇಂಗ್ಲಿಷ್ ಭಾಷೆಯ ಮೂಲಕ ನಮಗೆ ಲಭ್ಯವಾಗಿವೆ. ಸತ್ಯ, ಸೌಂದರ್ಯ ಮತ್ತು ಸಾವಯವ ಸಂಬಂಧದ ಮಾನದಂಡದಿಂದ ಪರಿಶೀಲಿಸಿದಾಗ - ಕನ್ನಡಿಗರು ಸಂಕೋಚ, ದಾಕ್ಷಿಣ್ಯ, ಒಡಕನ್ನು ಬಿಟ್ಟು ನೋಡಿದರೆ - ಜಗತ್ತಿನ ಅತ್ಯುತ್ತಮ ಸಾಹಿತಿಗಳ ಸಾಲಿನಲ್ಲಿ ಭೈರಪ್ಪನವರು ನಿಂತಿರುವುದು ಕಾಣುತ್ತದೆ. ಆ ಸಾಲು ದೊಡ್ಡದೇನೂ ಅಲ್ಲ.

ಎಂದೋ ಯಾರೋ ಓದಿ ಏನನ್ನೋ ಮೆಚ್ಚಿ ಕೊಡಬಹುದಾದ ಅಥವಾ ಮತ್ತಾವುದೋ ಕಾರಣಕ್ಕೆ ಕೊಡದಿರಬಹುದಾದ ಪ್ರಶಸ್ತಿಗಳನ್ನು ನಾವು ಮಾನದಂಡಗಳಾಗಿ ಇಟ್ಟುಕೊಳ್ಳುವುದು ಬೇಡ. ನಮ್ಮ ಅನುಭವವನ್ನೇ ಪರೀಕ್ಷಿಸಿಕೊಳ್ಳೋಣ. ಸಾರ್ಥ ಕಾದಂಬರಿಗಿಂತ ಉತ್ತಮಕಾದಂಬರಿಗಳು ಭೈರಪ್ಪನವರಿಂದಲೇ ಬಂದಿವೆ ಎನ್ನುತ್ತಾರೆ. ಸಾರ್ಥದ ಪ್ರತಿ ಅಕ್ಷರವನ್ನೂ ೩೨ ಬಾರಿ ಅಗಿದು ನುಂಗಿ ನೀರುಕುಡಿದಿದ್ದೇನೆ. ಅನೇಕ ಜಗತ್ಪ್ರಸಿದ್ಧ ಕಾದಂಬರಿಗಳನ್ನೂ ಹೀಗೆಯೇ ಓದಿದ್ದೇನೆ. ಆ ಬಲದಿಂದ ಹೇಳುವುದಾದರೆ ‘ಸಾರ್ಥ’ ನಮ್ಮ ಪಾಲಿಗೆ ಒಂದು ಅನರ್ಘ್ಯರತ್ನ. ಅಂಥ ಸಂಪತ್ತನ್ನು ಸಂಕೇತಿಭಾಷೆಗೂ ಭೈರಪ್ಪನವರು ಬಳುವಳಿಯಾಗಿ ಕೊಟ್ಟಿದ್ದಾರೆ. ತಮ್ಮ ಭಾಷೆಯಲ್ಲಿ ಸಾರ್ಥದಂಥ ಕಾದಂಬರಿ ಇದೆ ಎಂದು ಸಂಕೇತಿಗಳು ಹೆಮ್ಮೆಪಟ್ಟುಕೊಳ್ಳಬಹುದು.

ಭೈರಪ್ಪನವರ ಕಾದಂಬರಿಗಳನ್ನು ಸಹೃದಯರು ಮತ್ತೆ ಮತ್ತೆ ಓದುತ್ತಾರೆ, ಆನಂದಪಡುತ್ತಾರೆ. ಆ ಮೂಲಕ ಅವು ಅಮರಕೃತಿಗಳಾಗಿವೆ. ನಾಲ್ಕು-ಹತ್ತು-ಇಪ್ಪತ್ತು-ಇಪ್ಪತ್ತೈದು ಬಾರಿ ಓದಿದವರೂ ಇದ್ದಾರೆ. ಅವರಲ್ಲಿ ಪಾಮರರೂ ಇದ್ದಾರೆ, ಪಂಡಿತರೂ ಇದ್ದಾರೆ. ನಾಲ್ಕುಬಾರಿ ಸಾರ್ಥವನ್ನು ಕನ್ನಡದಲ್ಲಿ ಓದಿ, ಐದನೆಯ ಬಾರಿ ಸಂಕೇತಿಯಲ್ಲಿ ಓದಿ; ಇಪ್ಪತ್ತು ಬಾರಿ ಕನ್ನಡದಲ್ಲಿ ಓದಿ, ಸಂತೋಷ; ಇಪ್ಪತ್ತೊಂದನೆಯ ಬಾರಿ ಸಂಕೇತಿಯಲ್ಲಿ ಓದಿ. ಬೇರೆ ಭಾಷೆಗಳ ಸೊಗಡನ್ನು ಸವಿಯಿರಿ. ಅನ್ಯಭಾಷೆಯೊಂದರಲ್ಲಿ ಭೈರಪ್ಪನವರು ಹೇಗೆ ಮೈತಳೆಯುತ್ತಾರೆ ಎಂಬ ಅನುಭವ ಪಡೆಯಿರಿ. ಹೊಸ ಆನಂದ ನಿಮ್ಮದಾಗುತ್ತದೆ.

ನಮಸ್ಕಾರ.
ಲೇ - ಸಂಸ್ಕೃತಿ ಸುಬ್ರಹ್ಮಣ್ಯ, ಮೈಸೂರು
೯೪೪೮೦೩೭೭೬೨