ಡಾ.ಬಿ.ಎಸ್.ಪ್ರಣತಾರ್ತಿಹರನ್ ಅವರ ‘ಸಂಗ’ ಬರಹಗಳ ಸಂಕಲನವೆನ್ನುವುದಕ್ಕಿಂತ ಹೆಚ್ಚಾಗಿ, ‘ಅನೌಪಚಾರಿಕ ಆತ್ಮಕಥೆ’ ಎನ್ನಬಹುದು.ಅವರ ಬಾಲ್ಯ,ಕಲಿಕೆ,ಯೌವನ,ವೃತ್ತಿಜೀವನದ ಅನುಭವಗಳು ಇಲ್ಲಿ ಹೊಳೆಯಾಗಿ ಹರಿದಿವೆ.ಜತೆಗೆ ಅವು ತಾತ್ತ್ವಿಕವಾಗಿಯೂ ಏನನ್ನೋ ಹೇಳುತ್ತಿವೆ.ಹಾಗೆ ಹೇಳುವುದು ಲೇಖಕರ ಉದ್ದೇಶವಾಗಿದೆಯೋ ಇಲ್ಲವೋ ಎಂಬುದು ಇಲ್ಲಿ ಅಪ್ರಸ್ತುತ.ಆದರೆ ಅವು ಅಂಥದೊಂದು ರೂಪವನ್ನು ತಳೆದಿರುವುದಂತೂ ನಿಶ್ಚಿತ.ಉದಾಹರಣೆಗೆ,ಹುಡುಗರೂ ಹುಡುಗಿಯರೂ ಪರಸ್ಪರ ಮಾತನಾಡಬಾರದ ಕಾಲದಲ್ಲಿ,ಶಾಲೆಯಲ್ಲಿ ತಂಗಿ ತಲೆ ತಿರುಗಿ ಬಿದ್ದಾಗ,ತಾನು ನಿರ್ಭಾವುಕನಾಗಿ ನಿಂತಿದ್ದ ಸನ್ನಿವೇಶವನ್ನು ಅವರು ಚಿತ್ರವತ್ತಾಗಿ ವಿವರಿಸುತ್ತಾರೆ.ಜತೆಗೆ ತಾವು ಹೇಗೆ ವರ್ತಿಸಬೇಕಿತ್ತೆಂಬ ಈಗಿನ ಕಲ್ಪನೆಯನ್ನು ಜತೆಗೇ ಇಡುತ್ತಾರೆ.

ಹೀಗೆ ಇಡುವ ಬರಹದ ರೀತಿಯೇ ಮನುಷ್ಯಸಂಬಂಧಗಳ ಬಗ್ಗೆ ನಮಗೆ ಅಪರೂಪದ ನೋಟವೊಂದನ್ನು ಕೊಡುತ್ತದೆ.ಇಂಥ ಹಲವಾರು ಘಟನೆ,ಸನ್ನಿವೇಶಗಳು ಈ ಕೃತಿಯಲ್ಲಿವೆ.ತನ್ನ ಸಹೋದ್ಯೋಗಿಯೊಬ್ಬ ಕಚೇರಿಯಲ್ಲಿ ವೇಶ್ಯೆಯ ಸಂಗ ಮಾಡಿ ಆ ಕುರಿತು ಮೇಲಧಿಕಾರಿಗಳಿಗೆ ತಾನು ದೂರು ನೀಡಿ,ವಿಚಾರಣೆಯ ಸಮಯ ಬಂದಾಗ ಆತ ವೇಶ್ಯೆಯ ಸುಳ್ಳು ಸಾಕ್ಷಿಯ ಮೂಲಕ ತನ್ನ ದೃಢ ನಿಲುವನ್ನು ಸೋಲಿಸಿದ್ದನ್ನೂ ಪ್ರಣತಾರ್ತಿಹರನ್ ನೇರವಾಗಿ ಬರೆಯುವಾಗ,ಅದೊಂದು ಸಿನಿಮಾದ ಉಸಿರುಗಟ್ಟಿಸುವ ದೃಶ್ಯವೋ ಎಂಬಷ್ಟು ತೀವ್ರತೆ ಉಂಟುಮಾಡುತ್ತದೆ.ಆಕಾಶವಾಣಿಯಲ್ಲಿ ತಾವು ನಿರ್ವಹಿಸಿದ ಉದ್ಯೋಗದ ಹಾಗೂ ಅದಕ್ಕೆ ಸಂಬಂಧಿಯಾಗಿ ಬರುವ ಸನ್ನಿವೇಶಗಳನ್ನು ವಿವರಿಸುವಾಗ ಅವರ ಗದ್ಯಕ್ಕೆ ವಿಶಿಷ್ಟ ಮೊನೆಚು ಮೂಡೂತ್ತದೆ.ಇನ್ನು ತಮ್ಮ ಕವನಗಳು ರೂಪುಗೊಂಡ ಸನ್ನಿವೇಶಗಳನ್ನೂ ಅವರು ಬರೆದಿದ್ದಾರೆ.ಕಾವ್ಯ ಇಂಥ ನಿಶ್ಚಿತ ಘಟನೆಗಳ ಅಡಿಗಟ್ಟಿನಲ್ಲಿ ನೇರವಾಗಿ ಹುಟ್ಟಿಕೊಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ಎತ್ತಬಹುದಾದರೂ,ಕಾವ್ಯವು ಆಸ್ವಾದನೆಗೆ ಮಾತ್ರವೇ ಅಲ್ಲ,ಅದು ಸಮಾಜದ ಚಲನೆಗೂ ಕಾರಣವಾಗಬೇಕು ಎಂಬ ದೃಷ್ಟಿಯಿಂದ ನೋಡಿದಾಗ ಇವು ವಿಶಿಷ್ಟವಾದ ರಚನೆಗಳಾಗಿ ಕಾಣುತ್ತವೆ.
-ವಿಶ್ವವಾಣಿ,೩.೭.೨೦೧೬