ಮೊದಲ ಮಾತು

ಮೊದಲ ಮಾತು

ಒಮ್ಮೆ ಅರಕಲಗೂಡು ತಾಲ್ಲೂಕಿನ ಅಗ್ರಹಾರ ಗ್ರಾಮಕ್ಕೆ ಹೋಗಿದ್ದೆ. ಕೆರೆಯ ದಡದಲ್ಲಿ ಒಂದು ಕಲ್ಲು ಕಂಡಿತು. ಅದನ್ನು ಶಾಸನ ಎಂದೇ ಕರೆಯಬೇಕು; ಅಕ್ಷರಗಳದಲ್ಲ, ಕುರುಹಿನದು. ಸ್ನಾನಕ್ಕೆ ಬಂದ ಪುರುಷರು ಪುಟ್ಟದೊಂದು ಕಲ್ಲಿನಿಂದ ದೊಡ್ಡ ಕಲ್ಲೊಂದರ ಮೇಲೆ ತೇದು ಹೊಮ್ಮಿದ ವಿಭೂತಿಯನ್ನು ಧರಿಸುವುದು ಒಂದು ಕ್ರಮ. ಆ ದೊಡ್ಡ ಕಲ್ಲಿನ ಮೈಮೇಲೆ ಉಜ್ಜಿ ಉಜ್ಜಿ ನಾಮದ ಆಕಾರಕ್ಕೆ ಗುಳಿ ಬಿದ್ದ ಆಕಾರಗಳು ತುಂಬಿದ್ದವು. ಗೂಟಿನಾಮ ಹಚ್ಚಿಕೊಳ್ಳುವ ಬ್ರಹ್ಮಚಾರಿಗಳಿಗೆ ಅದು 'ನಾಮತ್ತೆ ಕಲ್ಲ್', ಗೃಹಸ್ಥರಿಗೆ 'ವಿಭೂತಿ ಕಲ್ಲ್'. ಅಲ್ಲಿದ್ದುದು ಅಂಥ ಒಂದೇ ಕಲ್ಲಲ್ಲ, ಹಲವು ಇದ್ದವು. ನೂರಾರು ವರ್ಷಗಳಿಂದ ಜನರು ಕೆರೆಯಲ್ಲಿ ಮಾಡಿದ ಸ್ನಾನ, ಹಚ್ಚಿಕೊಂಡ ವಿಭೂತಿಯ ಕುರುಹು ಅದು, ಒಂದು ಸಂಸ್ಕೃತಿಯ ಕುರುಹು. ಬ್ರಾಹ್ಮಣರು ನೆಲೆಸಿದ ಎಲ್ಲೆಡೆಯ ಕೆರೆ ಅಥವಾ ನದಿಯ ದಂಡೆಗಳಲ್ಲಿ ಇಂಥ ಕಲ್ಲುಗಳು ಇದ್ದೇ ಇರುತ್ತವೆ; ಸಂಕೇತಿ ನೆಲೆಗಳಲ್ಲಿ ಇದು ಪ್ರಖರವಾಗಿ ಕಾಣುತ್ತದೆ. ಸಂಕೇತಿ ಸಮುದಾಯಕ್ಕೆ ಸಂಬಧಿಸಿದ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸುತ್ತಿರುವ ಹೊತ್ತಿನಲ್ಲಿ ಇಂಥ ವಿಶೇಷ ಕುರುಹುಗಳನ್ನು ಸಂಗ್ರಹಿಸಬೇಕೆಂದು ತೋರಿತಿತು. ನಾಮದ ಕಲ್ಲು ಅಥವಾ ವಿಭೂತಿಕಲ್ಲು ಈಗ ಪಳೆಯುಳಿಕೆಯಾಗಿ ಹೋಗಿದೆ. ಬದಲಾದ ಜೀವನ ಪದ್ಧತಿಗೆ ಅದು ಕನ್ನಡಿ. ಹಳ್ಳಿಗಳಿಂದಾದ ಹೊರವಲಸೆ ಮತ್ತು ಅದರಿಂದಾಗಿ ಹಳ್ಳಿಗಳಲ್ಲಿ ಕ್ಷೀಣಿಸಿದ ಜನಸಂಖ್ಯೆಯೂ ಅದಕ್ಕೊಂದು ಕಾರಣ. ನಂಬಿಕೆ, ಶ್ರದ್ಧೆ ಇತ್ಯಾದಿ ಹಲವು ಅಂಶಗಳೂ ಇದಕ್ಕೆ ಹೊಂದಿಕೊಂಡಂತೆ ಇರುತ್ತವೆ. ಒಟ್ಟಿನಲ್ಲಿ, ಸಂಕೇತಿ ವಸ್ತು ಸಂಗ್ರಹಾಲಯವೊಂದು ಸ್ಥಾಪನೆಗೊಂಡರೆ ಅದರಲ್ಲಿ ಈ ಕಲ್ಲು ಅಗತ್ಯವಾಗಿ ಇರುತ್ತದೆ. ಅಂಥ ವಸ್ತುಸಂಗ್ರಹಾಲಯದ ಸ್ಥಾಪನೆಯೊಂದರ ಕನಸು ಸಮುದಾಯ ಅಧ್ಯಯನ ಕೇಂದ್ರಕ್ಕಿತ್ತು ಎಂಬುದು ಈಗ ಕೇವಲ ಸ್ಮರಣೆಯ ಮಾತು. ಕೇವಲ ಈ ಕಲ್ಲಿನ ಮಾತಲ್ಲ, ಕಾಪಿಡಬಹುದಾದ ಎಲ್ಲ ವಿಶೇಷಗಳನ್ನೂ ಇಲ್ಲಿ ಸಂಗ್ರಹಿಸುವ ಇರಾದೆ ಇದೆ. ಇಲ್ಲಿ ಎಂದು ಹೇಳಿದ್ದು ಕುರುಹು ಎಂಬ ಅಂಕಣವನ್ನು ಕುರಿತು. ಇದೇನೂ ಯೋಜನಾಬದ್ಧವಾಗಿ ಕೈಗೊಂಡ ಕೆಲಸವಲ್ಲ, ಅದಕ್ಕಾಗಿಯೇ ಹೊರಟೂ ಇಲ್ಲ. ಅಯಾಚಿತವಾಗಿ ಸಿಕ್ಕಿದ ಸಾಮಗ್ರಿಯನ್ನು ಇಲ್ಲಿ ಒಟ್ಟೈಸಲಾಗುತ್ತದೆ. ಆಸಕ್ತರು ಇದನ್ನು ತುಂಬಿ ಶ್ರೀಮಂತಗೊಳಿಸ ಬಹುದು. ತಮಗಿದೋ ಆದರದ ಆಹ್ವಾನ ! ಬಿ.ಎಸ್.ಪ್ರಣತಾರ್ತಿ ಹರನ್ ೦೬-೦೬-೨೦೧೮